Monday, November 17, 2008

ಹೊಟ್ಟೆ ಸತ್ತಪ್ರಾಣಿಗಳನ್ನು ಹೂಳುವ ಗೋರಿಯೇ ?!

ಜನ ಮಾಂಸ ತಿನ್ನೋದನ್ನು ಬಿಡುತ್ತಿದಾರಂತೆ !
ಗಡ್ಡೆಗೆಣಸಿನತ್ತ ನೋಡಲಾರಂಭಿಸಿದ್ದಾರಂತೆ. ಹುಲ್ಲು ತಿನ್ನೋ ದನಗಳಿಗೇ ಮಾಂಸ ತಿನ್ನಿಸಿ ದನಗಳಿಗೆ ಹುಚ್ಚು ಹಿಡಿಸಿ, ಮನುಷ್ಯರೂ ಹುಚ್ಚು ಹಿಡಿಸಿಕೊಂಡು ಸತ್ತದ್ದು ಹಳೆ ಕಥೆ. ಈಗ ಎಲ್ಲೆಲ್ಲೂ ವೆಜ್ಜಿಸಂ.. ಹೆಲ್ತ್ ವೆಲ್ತ್ ಹೆಪ್ಪಿನೆಸ್..ಘೋಷಣೆ. ವೆಜ್ಜಿಸಂ ಕ್ಲಬ್ಗೆ ಸೇರಿ ಅಂತ ಅಂತರ್ಜಾಲ ತುಂಬಾ ಆಹ್ವಾನ. ಒಂದು ದಿಟ್ಟ ನಿರ್ಧಾರ ಮಾಡಿಬಿಡಿ, ಅಂದರೆ ಮಾಂಸ ಸಾಕು ಸಸ್ಯ ಬೇಕು ಅಂತ ಹೊರಟುಬಿಡಿ, ಆಮೇಲೆ ಯೂ ಆರ್ ಡಿಫೆರೆಂಟ್..ಅಂತ ಕರೆಗಳು.. ಒಂದು ಬಿಸ್ಕಿಟ್ ಪ್ಯಾಕೇಟಲ್ಲೂ ಚೌಕುಳಿಯ ನಡುವೆ ಹಸುರು ಬಿಂದು ಮುದ್ರೆ ಕಾಣಿಸುತ್ತಿರುವುದು ಈ ಜಾಗತಿಕ ನೋಟವಾದ ವೆಜ್ಜಿಸಂ ಕಾರಣಕ್ಕೇ. ಮಾಂಸ ಏನು ಅಗ್ಗ ಅಲ್ಲವಂತೆ. ಒಂದು ಕಿಲೋ ಚಿಕನ್ ನಿಮ್ಮ ಮನೆಗೆ ಬರಬೇಕಾದರೆ ಅದಕ್ಕೆ ಹತ್ತು ಕಿಲೋ ಧಾನ್ಯ ಖರ್ಚಾಗಿದೆ ಎಂದರ್ಥ. ಅದೇ ನಿಮ್ಮ ಬಾಡೂಟಕ್ಕೆ ಒಂದು ಕಿಲೋ ಮಟನ್ ತಂದರೆ, ಅಷ್ಟೂ ಮಟನ್ ನೂರು ಕಿಲೋ ಧಾನ್ಯ ಮುಕ್ಕಿ ತಯಾರಾಗಿರುತ್ತದೆ. ಕೃಷಿ ಅಂಕಿ ಅಂಶ ಇಲಾಖಾ ವರದಿ ಪ್ರಕಾರ ಒಂದು ಹೆಕ್ಟೇರು ಪ್ರದೇಶದಲ್ಲಿ ಇಪ್ಪತ್ತು ಸಾವಿರ ಕಿಲೋ ಬಟಾಟೆ ಬೆಳೆಯಬಹುದು. ಅದೇ ಜಾಗದಲ್ಲಿ ಹುಲ್ಲು ಬೆಳೆಸಿ ಆಡು, ಕುರಿಗಳಿಗೆ ತಿನ್ನಿಸಿದರೆ ೫೦ ಕಿಲೋ ಮಾಂಸ ಸಿಗುತ್ತದೆ. ಒಂದು ಸಾವಿರ ಹೆಕ್ಟೇರ್ ಸೋಯಾ ಬೆಳೆದರೆ ೧೧೨೪ ಕಿಲೋ ಪ್ರೋಟೀನ್ ಸಿಗುತ್ತದೆ. ಅದೇ ಭತ್ತ ಬೆಳೆದರೆ ೯೩೮ ಕಿಲೋ ಪ್ರೋಟೀನ್ ಉತ್ಪಾದನೆ ಆದಂತಾಯಿತು. ಜೋಳ ಹಾಕಿದರೆ ೧೦೪೩ ಕಿಲೋ ಪ್ರೋಟೀನ್ ಲಭ್ಯ. ಇಷ್ಟನ್ನೆಲ್ಲಾ ಸೇರಿಸಿ ಕೋಣಗಳಿಗೆ ತಿನ್ನಿಸಿ ಆಮೇಲೆ ಆ ಕೋಣವನ್ನು ಸಿಗಿದರೆ ಸಿಗೋದು ೬೦ ಕಿಲೋ ಪ್ರೋಟೀನ್ ಮಾತ್ರ ಎನ್ನುತ್ತದೆ ಹಾರ್ವರ್ಡ್ ವಿಶ್ವವಿದ್ಯಾಲಯದ ವರದಿ. ಬ್ರಿಟನ್ನಿಂದ ಬಂದಿರೋ "ವೆಜ್ಜಿಸಂ’ ವರದಿ ನೋಡಿ. ಅಲ್ಲಿ ಹೇಳಿಕೇಳಿ ೭೦-೮೦ ಮಿಲಿಯ ಜನ. ಅಲ್ಲಿ ಶೇ.೯೦ ಕೃಷಿ ಭೂಮಿಯಲ್ಲಿ ಬೆಳೆದದ್ದನ್ನು ಹಾಕೋದು ಜಾನುವಾರುಗಳಿಗೆ. ಏಕೆಂದರೆ ಜಾನುವಾರು ಕೊಬ್ಬಿ ಮಾಂಸ ಉತ್ಪಾದನೆ ಮಾಡಬೇಕು. ಕೃಷಿ ಭೂಮಿಯಲ್ಲಿ ಬೆಳೆದದ್ದನ್ನು ಜನ ತಿಂದರೆ ೨೫೦ ಮಿಲಿಯ ಜನರಿಗೆ ಬಿರಿಯುವಷ್ಟು ತಿಂದು ತೇಗಬಹುದು. ಇನ್ನು ಅಮೆರಿಕಾದ ಕತೆ. ಅಲ್ಲಿ ಜೋಳ ಬೆಳೆದು, ತಿನ್ನೋದು ಜನರಲ್ಲ, ದನಗಳು. ಬೀಫ್ ಮಾರುಕಟ್ಟೆಗೆ ಅವರು ಕೊಡುವ ಜೋಳ ಜಾಗತಿಕ ಮಾರುಕಟ್ಟೆಗೆ ಬಂದರೆ ಜೋಳ ಧಾರಣೆ ಈಗಿರುವ ಅರ್ಧಕ್ಕೆ ಇಳಿಯಬಹುದು. ಇನ್ನು ದಕ್ಷಿಣ ಅಮೆರಿಕೆಯ ನಿತ್ಯ ಹರಿದ್ವರ್ಣ ಕಾಡುಗಳು ಬೀಫ್ಗಾಗಿ ಆಹಾರ ಬೆಳೆಸಲು ನಾಶವಾಗುತ್ತಿವೆ. ದಿನಾ ಮಾಂಸ ತಿನ್ನುವವರಿಂದಾಗಿ ಭಾರತದಲ್ಲಿ ಇಪ್ಪತ್ತು ಮಿಲಿಯ ಹೆಕ್ಟೇರ್ ಭೂಮಿಯಲ್ಲಿ ಬೆಳೆದ ಧಾನ್ಯ ಪೋಲಾಗುತ್ತಿದೆ. ಈಗಿರುವ ಮಾಂಸ ಉತ್ಪಾದನೆಯಲ್ಲಿ ಶೇ.೧೦ರಷ್ಟು ಕುಸಿತವಾದರೆ ಸಾಕು, ೬೦ ಮಿಲಿಯ ಜನರಿಗೆ ಬೇಕಾದಷ್ಟು ಬೇಳೆ ಕಾಳು ತರಕಾರಿ ನೀಡಬಹುದು ಎನ್ನುತ್ತಾರೆ ವಿಜ್ಞಾನಿಗಳು. ನಿಮಗೆ ಗೊತ್ತಾ? ಈ ಭಾರತದಲ್ಲಿ ಇಷ್ಟೊಂದು ಜನ ಇದ್ದರೂ ಹಸಿವಿನ ತಾಂಡವ ಏಕಿಲ್ಲ ಎಂದರೆ ಅದಕ್ಕೆ ಕಾರಣ ನಾವು ವೆಜ್ಗಳಾಗಿರೋದೇ. ಒಂದು ವೇಳೆ ಭಾರತೀಯರೆಲ್ಲಾ ಮಾಂಸ ಮುಕ್ಕಲು ಶುರು ಮಾಡಿದರೆ, ಈ ಭೂಗ್ರಹದಲ್ಲಿ ಬೆಳೆದದ್ದು ಏನೇನೂ ಸಾಲದು. ಇಷ್ಟಕ್ಕೂ ಜೀವನದ ಯಶಸ್ಸಿನ ಗುಟ್ಟು ಇರೋದು ಸಸ್ಯಾಹಾರದಲ್ಲೇ. ಪ್ರಾಣಿಜನ್ಯ ಪ್ರೋಟೀನ್ ಸೇವಿಸುವವರಲ್ಲಿ ಐಕ್ಯೂ ಕೊರತೆ ಢಾಳಾಗಿ ಕಾಣುತ್ತದೆ ಎನ್ನುತ್ತದೆ ಮಾಂಸ ತಿಂದ ವಿಜ್ಞಾನಿಗಳೇ ಕೊಟ್ಟ ವರದಿ. ಇಷ್ಟೆಲ್ಲಾ ಈಗ ಗೊತ್ತಾಗುತ್ತಿದೆ ಎಂದಲ್ಲ. ಎಂದೋ ಗೊತ್ತೇ ಇದೆ, ಆದರೆ ತಿನ್ನುವಾಗ ಯಾವುದೂ ನೆನಪಾಗುವುದಿಲ್ಲ!